ಭಂಗಿ!!!
ಬಿಳಿ ಗೋಡೆ ಮೇಲೆ ಬಣ್ಣಗಳ ನೂರೆಂಟು ಭಂಗಿ,
ಮೂಡಿಸಿದೆ ಕುಳಿತಲ್ಲೆ ಈ ಹೊಗೆಬಿಡುವ ಭಂಗಿ,
ಕನಸಲ್ಲೇ ನನಸುಂಟು, ಅರಿವಲ್ಲೆ ಮರೆವುಂಟು,
ಕಲ್ಪನೆಗಳು ಕಣ್ಣೆದುರೆ ಗೋಚರಿಸುವುದುಂಟು,
ಇಲಿಯೊಂದು ಹಾವಾಯ್ತು ಆಮೇಲೆ ಹೂವಾಯ್ತು
ಹೂವಳೆದ್ದ ಬೆಕ್ಕೊಂದು ಆ ಇಲಿಗೆ ಮುಳುವಾಯ್ತು.
ಬಹು ಮಂದವಾಗಿ ನಿಂತಿತು ಸಮಯದ ಚಲನೆ
ಗಡಿಯಾರದ ಮುಳ್ಳುಗಳೂ ಜಾರಿದವು ಮೆಲ್ಲನೆ
ಅಲ್ಲಲ್ಲೇ ವಾಲಿದವು ಚೇರುಗಳು ಗೋಡೆಗಳು
ಕಣ್ಣ ಮಿಟುಕಿನ ಘಾತಕ್ಕೆ ಚದುರಿದವು ಮೋಡಗಳು
ಕಂಡೆ ಬೆಳಕಿನಲೆಯೊಂದು ಕಣವಾಗುವ ರೀತಿ
ನಾನಂತು ಅರಿಯೆ ಬೆಳಕಿನ ಈ ಇಬ್ಬಗೆಯ ನೀತಿ
ಈ ಮುಂಚೆ ನೋಡಿದ್ದು ನಾ ಬಲ್ಲ ಈ ಜಗ
ಈಗಿರುವುದೆಲ್ಲ ಬರಿ ಕಣ್ಮುಂದಿನ ಸೋಜಿಗ
ಆದಿಯೂ ನಾಂದಿಯೂ ಅಂತ್ಯವೂ ಈ ಭಂಗಿ
ಈ ಭಂಗಿ ಇರಬಹುದೆ ಇಹಪರಕು ಕೊಂಡಿ!?