ನಮ್ ಮೇಷ್ಟ್ರು...

          ಎತ್ತರದ ನಿಲುವು, ಗಂಭೀರ ನಡೆ, ಪಾದರಸದಂಥ ವ್ಯಕ್ತಿತ್ವ, ಶಿಸ್ತು, ಆಕರ್ಷಕ ಮಂದಹಾಸ, ಜೋಕುಗಳು, ಎರಡು ಕ್ಷಣ ಮೀರದ ಕೋಪ, ಅಪರಿಮಿತ ಪಾಂಡಿತ್ಯ, ಇವೆಲ್ಲವನ್ನು ಒಟ್ಟಾಗಿಸಿದರೆ ಮನದಲ್ಲಿ ಕಾಣುವುದು, ಕಾಡುವುದು ವೆಂಕಟಕೃಷ್ಣ ಸರ್ ಅವರ ಚಿತ್ರ.

          ನಾವಾಗ ಏಳನೇ ಕ್ಲಾಸು. ನಮಗೆ ಕ್ಲಾಸ್‍ರೂಮಲ್ಲಿ ಕೂತು ಪಾಠ ಕೇಳುವುದು ಸ್ವಲ್ಪ ಬೇಜಾರಿನ ಸಂಗತಿಯಾಗಿತ್ತು. ನಮ್ಮ ಸ್ಠಿತಿ ಅರಿತೋ ಏನೋ ವೆಂಕಟಕೃಷ್ಣ ಮೇಷ್ಟ್ರು ಆದಷ್ಟು ಮರದಡಿಯಲ್ಲೇ ನಮಗೆ ಪಾಠ ಮಾಡುತ್ತಿದ್ದರು. ಪ್ರಶ್ನೋತ್ತರ ಬರೆಸಬೇಕಾಗಿ ಬಂದಾಗ ಅನಿವಾರ್ಯವಾಗಿ ಕ್ಲಾಸರೂವiಲ್ಲಿ ಕೂರುತ್ತಿದ್ದೆವು. ಮರದ ನೆರಳಲ್ಲಿ ಅವರ ಪಾಠ ಕೇಳುತ್ತಾ ಕುಳಿತೆವೆಂದರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಇದರಿಂದಾಗಿ ಇಂಗ್ಲಿಷ್ ನಮ್ಮ ಅಚ್ಚುಮೆಚ್ಚಿನ ವಿಷಯವಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ ಬಿಡಿ.

          ಹೀಗೊಂದು ದಿನ ಎಂದಿನಂತೆ ಮರದಡಿಯಲ್ಲಿ ಪಾಠಮಾಡುತ್ತಿದ್ದರು. ಪಾಠ ಮುಗಿದಮೇಲೆ ಒಂದು ಪ್ರಶ್ನೆಗೆ ಆವಾಗಲೇ ಉತ್ತರ ಬರೆಸಬೇಕಾಗಿ ಬಂತು. ಹೀಗಾಗಿ ಅವರು ಉತ್ತರವನ್ನು ಹೇಳಿದಂತೆ ನಾವು ಬರೆಯತೊಡಗಿದೆವು. ಬೋರ್ಡ್ ಇರದಿದ್ದರಿಂದ full stop, comma ಗಳನ್ನೂ ಸೇರಿಸಿ ಹೇಳತೊಡಗಿದರು. ಅವರ ಎದುರಿಗೆ ಕುಳಿತಿದ್ದ ಹುಡುಗನೊಬ್ಬ ಒಂದು comma ಹಾಕುವುದನ್ನು ಬಿಟ್ಟಿದ್ದ. ಅದನ್ನು ಗಮನಿಸಿದ ಮೇಷ್ಟ್ರು ಇನ್ನೊಮ್ಮೆ ಎಲ್ಲರಿಗೂ “comma ಹಾಕಿದ್ದೀರಾ? ನೋಡ್ಕೋಳಿ” ಎಂದರು. ಆಗಲೂ ಕೂಡ ಆ ಹುಡುಗ comma ವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ. ವೆಂಕಟಕೃಷ್ಣ ಮೇಷ್ಟ್ರು ಸಿಟ್ಟಾಗುತ್ತಿದ್ದದು ಬಹು ಅಪರೂಪ. ಆಗ ಅವರಿಗೆ ಸಿಟ್ಟು ಬಂದಿತ್ತು. ಎದುರಿಗಿದ್ದ ಹುಡುಗನಿಗೆ ಸಿಟ್ಟಿನಿಂದಲೇ ಹೇಳಿದರು-“ಅಲ್ಲಿ comma ಬರಬೇಕು. ಸರಿಯಾಗಿ ಬರಿ. ಏನ್ ಅನ್ಕೊಂಡಿದಿಯಾ comma ಅಂದ್ರೆ? punctuation ಅಂದ್ರೆ ಹುಡುಗಾಟ ಅಲ್ಲ. ಹಿಂದೊಮ್ಮೆ ಬರಿ ಒಂದು comma ದಿಂದ ಆದ ಪ್ರಮಾದ ಒಬ್ಬನ ಜೀವವನ್ನೇ ಬಲಿತೆಗೆದುಕೊಂಡಿದೆ. ಕೇಳಿಲ್ಲಿ. ಐರ್ಲಂಡ್‍ನಲ್ಲಿ ರಾಜವಿರೋಧಿ ಕೆಲಸದಿಂದಾಗಿ ಒಬ್ಬ ಬಂಧಿತನಾಗಿದ್ದ. ನ್ಯಾಯಾಧೀಶರು ಅಂದಿನ ಕಾನೂನಿನಲ್ಲಿ ಬರೆದಂತೆ If a man be adherent to the King’s enemies in his realm giving them aid and comfort in the realm or elsewhere… ಎಂದು ಓದುವ ಬದಲು in the realm, or elsewhere……ಎಂದು ಓದಿದರು. realm ಎದುರಿಗೆ ತಪ್ಪಾಗಿ ಹಾಕಿದ ಬರಿ ಒಂದು comma ದಿಂದ ವಾಕ್ಯದ ಅರ್ಥವೇ ಬದಲಾಗಿ ಕೋರ್ಟು ಆ ಬಂಧಿತನಿಗೆ ಗಲ್ಲು ಶಿಕ್ಷೆ ವಿಧಿಸಿತು. ಇದು ನಡೆದಿದ್ದು 1916ರಲ್ಲಿ”  

          ವೆಂಕಟಕೃಷ್ಣ ಸರ್ ಅವರಷ್ಟು ಜ್ಞಾನದಾಹಿಯನ್ನು ನಾನೆಲ್ಲೂ ನೋಡಿರಲಿಲ್ಲ. ಮಧ್ಯಾನದ ಊಟಕ್ಕೆ ಮನೆಗೆ ನಡೆದು ಹೋಗುತ್ತಿರುವಾಗಲೂ ಸಹ ಪುಸ್ತಕ ಓದುತ್ತಲೇ ಹೋಗುತ್ತಿದ್ದದನ್ನು ನಾನು ಹಲವಾರು ಸಲ ಗಮನಿಸಿದ್ದೆ. ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಲೇಖನಗಳನ್ನು ಮೆಚ್ಚಿ ಬಂದ ಪತ್ರಗಳನ್ನು ಸಹ ಅವರು ಅದೇ ಸಮಯದಲ್ಲೆ ಓದುತ್ತಿದ್ದರು. ಸೆಲ್‍ಫೋನ್‍ಗಳು ಕೂಡ ಬಂದಿರದಿದ್ದ ಕಾಲದಲ್ಲಿ ಅವರೇ ನಮಗೆ ಇಂಟರ್ನೆಟ್, ಗೂಗಲ್ ಎಲ್ಲ ಆಗಿದ್ದರು. ನಾವು ಕೇಳುತ್ತಿದ್ದದ್ದು ಬರಿ ಪಠ್ಯೇತರ ಪ್ರಶ್ನೆಗಳನ್ನೇ. ಎಲ್ಲ ಪ್ರಶ್ನಗಳಿಗೂ ಸಮಾಧಾನವಾಗಿ ಉತ್ತರಿಸುತ್ತಿದ್ದರು. ದಿನನಿತ್ಯದ ವಿಜ್ಞಾನವಲ್ಲದೆ ಕ್ವಾಂಟಮ್ ಮೆಕ್ಯಾನಿಕ್ಸ್, ಆಸ್ಟ್ರೋಫಿಸಿಕ್ಸ್‍ನ ಅಚ್ಚರಿಗಳನ್ನು ಹೇಳಿ ನಮ್ಮನ್ನು ದಂಗುಪಡಿಸುತ್ತಿದ್ದದೂ ಉಂಟು.

          ಆಗ ಪ್ರಹ್ಲಾದ್ ಸರ್ ನಮಗೆ ಕನ್ನಡ ವಿಷಯಕ್ಕೆ ಶಿಕ್ಷಕರು. ಕೊನೆಯ ಹಳೆಗನ್ನಡ ಪದ್ಯವೊಂದು ಬಾಕಿ ಉಳಿದಿತ್ತು. ಪ್ರಹ್ಲಾದ್ ಸರ್ ಅವರಿಗೆ ಆ ಪದ್ಯವನ್ನು ತಾವು ಮಾಡುದಕ್ಕಿಂತ ವೆಂಕಟಕೃಷ್ಣ ಸರ್ ಮಾಡುವುದೇ ಸೂಕ್ತವೆನಿಸಿ ವೆಂಕಟಕೃಷ್ಣ ಸರ್ ಅವರನ್ನು ಕೇಳಿ ಒಪ್ಪಿಸಿದ್ದರು. ಅಂದು ತರಗತಿಗೆ ಇಬ್ಬರೂ ಬಂದರು. ಪ್ರಹ್ಲಾದ್ ಸರ್ ಅವರು- ‘ಈ ಪದ್ಯದ ಕ್ಲಾಸನ್ನು ನನಗಿಂತ ಇವರೇ ತೆಗೆದುಕೊಂಡರೆ ಸರಿಯೆಂದು ಕಂಡಿತು. ಹಾಗಾಗಿ ನನ್ನ ಕ್ಲಾಸನ್ನು ಇವರೇ ವಹಿಸುವರು’ ಎಂದು ಹೇಳಿ ನಿರ್ಗಮಿಸಿದರು. ವೆಂಕಟಕೃಷ್ಣ ಸರ್ ಅವರು ಪ್ರಹ್ಲಾದ್ ಸರ್ ಅವರ ವಿದ್ಯಾರ್ಥಿಗಳ ಮೇಲಿನ ಕಾಳಜಿಯನ್ನು ಮೆಚ್ಚಿ ಕ್ಲಾಸ್ ಶುರು ಮಾಡಿದರು.

         ತಮ್ಮ ಪಾಠಗಳೆನ್ನೆಲ್ಲ ಅಚ್ಚುಕಟ್ಟಾಗಿ ತತ್ಕಾಲಕ್ಕೆ ಮಾಡುತ್ತಿದ್ದರಿಂದ ಅವರಿಗೆ ಸಾಕಷ್ಟು ಬಿಡುವಿನ ತರಗತಿಗಳು ಸಿಗುತ್ತಿದ್ದವು. ಆ ಸಮಯದಲ್ಲಿ ಅವರು ಸ್ವಾರಸ್ಯಕರ ಕಥೆಗಳನ್ನು ಹೇಳುತ್ತಿದ್ದರು. ಷೇಕ್ಸ್‍ಪಿಯರ್‍ನ ಕೃತಿಗಳೆನ್ನೆಲ್ಲ ಆಳವಾಗಿ ಅಭ್ಯಸಿಸಿದ್ದ ಅವರು ನಮಗೆ ಷೇಕ್ಸ್‍ಪಿಯರ್‍ನ ಮೂರು ನಾಟಕಗಳನ್ನು ಕಥಾ ರೂಪದಲ್ಲಿ ಹೇಳಿದ್ದರು. ಹ್ಯಾಮ್ಲೆಟ್, ದಿ ಟೆಂಪೆಸ್ಟ್ ಮತ್ತು ಜೂಲಿಯಸ್ ಸೀಸರ್ ಕಥೆಗಳ ಪಾತ್ರಗಳು, ಸನ್ನಿವೇಶಗಳು ಇನ್ನೂ ನೆನಪಲ್ಲಿವೆ. ಅಲೆಕ್ಸಾಂಡರ್ ಮತ್ತು ಪೋರಸ್‍ನ ಭೇಟಿ, ಅಶೋಕನ ಸಾಧನೆಗಳನ್ನು ಅಷ್ಟೇ ರಸವತ್ತಾಗಿ ವಿವರಿಸಿದ್ದರು. ನಂಬಲಾಗದ ವಿಷಯವೆಂದರೆ ತತ್ತ್ವಶಾಸ್ತ್ರ, ವೇದೋಪನಿಷತ್ತುಗಳಾದಿಯಾಗಿ ಮಹಾಕಾವ್ಯಗಳೆನ್ನೆಲ್ಲ ಓದಿ, ಪುರಾಣದ ವಿಷಯವನ್ನಿಟ್ಟುಕೊಂಡು ಕಥೆಗಳನ್ನೂ ಬರೆದಿದ್ದ ಅವರಿಗೆ ದೇವರ ಇರುವಿಕೆಯಲ್ಲಿ ನಂಬಿಕೆ ಇರಲಿಲ್ಲ.

         ಅವರೊಮ್ಮೆ ‘ಜೈಮಿನಿ ಭಾರತ’ ಕೃತಿಯನ್ನು ಓದಿದ್ದರ ಹಿಂದಿನ ಸ್ವಾರಸ್ಯಕರ ಪ್ರಸಂಗವನ್ನು ನಮೆಗೆಲ್ಲ ಹೇಳಿದ್ದರು. ಅದನ್ನು ಅವರ ಮಾತಲ್ಲೇ ಹೇಳುವುದಾದರೆ-“ನಾನು ಚಿಕ್ಕವನಿದ್ದಾಗ ಜೈಮಿನಿ ಭಾರತ ಕೃತಿಯ ಬಗ್ಗೆ ಕೇಳಿದ್ದೆ. ಅದನ್ನು ನಾನೂ ಓದಬೇಕೆಂಬ ಆಸೆಯಿಂದ ಆ ಪುಸ್ತಕವನ್ನು ಕೊಂಡುತಂದೆ. ಮೊದಲ ಪುಟ ಓದುತ್ತಲೆ ಅಳು ಬಂದುಬಿಟ್ಟಿತು. ಸಂಪೂರ್ಣವಾಗಿ ಸಂಸ್ಕøತದಲ್ಲಿದ್ದರಿಂದ ಒಂದು ಅಕ್ಷರವೂ ಅರ್ಥವಾಗಲಿಲ್ಲ. ಹೇಗಾದರೂ ಮಾಡಿ ಇದನ್ನು ಓದಿ ಅರ್ಥಮಾಡಿಕೊಳ್ಳಲೇಬೇಕೆಂದು ಹಟವಿಡಿದು ಸಂಸ್ಕತ ಕಲಿತೊಡಗಿದೆ. ಈಗ ಇಡೀ ಜೈಮಿನಿ ಭಾರತ ನನ್ನ ನಾಲಗೆ ತುದಿಯಲ್ಲಿದೆ!”

          ಏಳನೇ ಕ್ಲಾಸು ಮುಗಿಸಿ ಹೈಸ್ಕೂಲಿಗೆ ಹೋಗಬೇಕಾಗಿ ಬಂದದು ನನಗೆ ದುಃಖದ ವಿಷಯವಾಗಿತ್ತು. ವೆಂಕಟಕೃಷ್ಣ ಸರ್ ಅವರ ಪಾಠ ಮತ್ತೆ ಸಿಗುವುದಿಲ್ಲ ಎಂಬುದಕ್ಕಾಗಿ. ನನ್ನ ಹಲವು ಸೀನಿಯರ್‍ಗಳು ಎಂಟನೇ ಕ್ಲಾಸಿನಲ್ಲಿದ್ದರೂ ಸಹ ವೆಂಕಟಕೃಷ್ಣ ಸರ್ ಅವರನ್ನು ಭೇಟಿಯಾಗಿ ಹಲವು ವಿಷಯಗಳನ್ನು ಕೇಳಿ ತಿಳಿಯುತ್ತಿದ್ದರು. ಇದನ್ನು ನೋಡಿ ನಾನು ಮತ್ತೆ ಅವರನ್ನು ಭೇಟಿಮಾಡುಬಹುದು ಎಂಬ ಸಮಾಧಾನವಿತ್ತು. ಆದರೆ ಹೈಸ್ಕೂಲಲ್ಲಿ ಆದದ್ದೆ ಬೇರೆ. ಅಲ್ಲಿ ಅಂಕಗಳದ್ದೆ ಹಾವಳಿ. ಒಂದೆರಡು ಬಾರಿಯಷ್ಟೆ ಭೇಟಿ ಸಾಧ್ಯವಾಯಿತು. ಅಲ್ಲಿಂದ ಪಠ್ಯೇತರವಾಗಿ ಕಲಿತದ್ದು ತುಂಬ ಕಡಿಮೆ.

          ಈಚೆಗೆ ಕೆಲ ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿಯಲ್ಲೆ ನಡೆದ ಒಂದು ಚೊಕ್ಕ ಸಮಾರಂಭದಲ್ಲಿ ಅವರ ಎರಡು ಪುಸ್ತಕಗಳು ಬಿಡುಗಡೆಯಾದವು. ಒಂದು ಕವನಸಂಕಲವಾದರೆ ಇನ್ನೊಂದು ಕಥಾಸಂಕಲನ. ಬಹಳಷ್ಟು ಶಿಕ್ಷಕರು, ಅವರ ಆಪ್ತರು ಅಲ್ಲದೆ ನೂರಾರು ಹಳೆಯ ವಿದ್ಯಾರ್ಥಿಗಳು ಅಲ್ಲಿ ಹಾಜರಿದ್ದರು. ಅಲ್ಲಿಗೆ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಾಹಿತಿಯೊಬ್ಬರು ತಾವು ಬಂದಿದ್ದ ಸಮಾರಂಭದ ಆಂತರ್ಯವನ್ನೇ ಮರೆತು ‘ವೆಂಕಟಕೃಷ್ಣರು ನಮ್ಮಲ್ಲಿ ಶಿಕ್ಷಕರಾಗಲು ಬಂದಾಗ ಅವರ ಇಂಟರ್‍ವ್ಯೂ ಮಾಡಿದವನೇ ನಾನು, ಅವರಿಗೆ ಕೆಲಸ ಕೊಟ್ಟಿದ್ದೇ ನಾನು’ ಎಂದೆಲ್ಲ ಮಾತಾಡಿದರು. ಅನ್ಯರಿಗೆ ಅರ್ಪಿತವಾಗಿದ್ದ ಸಮಾರಂಭದಲ್ಲಿ ತಮ್ಮ ಹಿರಿಮೆ ಹೇಳಿಕೊಂಡ ಆ ಬುದ್ಧಿಜೀವಿ ವಯಸ್ಸಿನೊಂದಿಗೆ ಬುದ್ಧಿ ಬೆಳೆಯಲೇಬೇಕೆಂಬ ನಿಯಮವಿಲ್ಲ ಎಂದು ಸಾಬೀತು ಪಡಿಸಿದರು. ಅಂದು ಬಿಡುಗಡೆಯಾದ ಆ ಎರಡು ಪುಸ್ತಕಗಳು ಖಂಡಿತ ಸಂಗ್ರಹಯೋಗ್ಯ. ನೀವೆಲ್ಲ ಓದಲೇಬೇಕಾದ ಕೃತಿಗಳು.

          ವೆಂಕಟಕೃಷ್ಣ ಮೇಷ್ಟ್ರು ಎಂದಿಗೂ ಹೆಸರು, ಪ್ರಶಸ್ತಿಗಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆದರೂ ಶಿಕ್ಷಣ ಇಲಾಖೆಯಿಂದ ಅವರಿಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ದೊರಕಿದವು. ಅನನ್ಯ ಪ್ರತಿಭಾವಂತರಾಗಿದ್ದರೂ ಅವರು ಬಹು ಸರಳವಾಗಿ, ನಮ್ಮ ನಿಮ್ಮೆಲ್ಲರಂತೆ ಬಾಳಿದರು. ಅವರ ಯೋಚನಾಲಹರಿ ಯಾರಿಗೂ ಎಟುಕದ, ಎಲ್ಲವನ್ನೂ, ಬದುಕಿನ ನಿಗೂಢತೆಯನ್ನೂ ಮೀರಿ ಅನಂತದವರಗೆ ಚಾಚಿತ್ತು ಎಂದು ನನಗನ್ನಿಸುತ್ತದೆ. ಅಂಥ ಶಿಕ್ಷಕರನ್ನು ಪಡೆದಿದ್ದಕ್ಕೆ ನಾನು ಧನ್ಯ. ಶಿಕ್ಷಕರ ಪಾಠ ನಮ್ಮ ಬದುಕು ರೂಪಿಸುತ್ತದೆ. ಆದರೆ ವೆಂಕಟಕೃಷ್ಣ ಸರ್ ಅವರ ಬದುಕೇ ಇಂದು ನಮಗೆ ಪಾಠವಾಗಿದೆ. ಅವರು ನಮ್ಮನ್ನು ಬಹುಬೇಗ ಅಗಲಿದ್ದು ನಮ್ಮೆಲ್ಲರಿಗೆ ಮತ್ತು ಶಾಲೆಗೆ ತುಂಬಲಾರದ ನಷ್ಟ. ಆದರೆ ಅವರ ನೆನಪು ಎಂದಿಗೂ ಅಮರ. ನಮ್ಮ ವೆಂಕಟಕೃಷ್ಣ ಮೇಷ್ಟ್ರಿಗೆ ನನ್ನ ಕೋಟಿ ಪ್ರಣಾಮಗಳು.

0 comments:

Post a Comment